ಬಾರಕೂರು
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನಲ್ಲಿ ಉಡುಪಿಯ ಉತ್ತರಕ್ಕೆ ಸುಮಾರು 16 ಕಿಮೀ ದೂರದಲ್ಲಿರುವ ಗ್ರಾಮ. ಜನಸಂಖ್ಯೆ 2,140 (1971). ತುಳುನಾಡಿನ ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ಒಂದು. 10ನೆಯ ಶತಮಾನದ ಹಾಗೂ ಹೊಯ್ಸಳರ ಕಾಲದ ಶಾಸನಗಳಲ್ಲಿ ಈ ಊರಿನ ಹೆಸರು ಬಾರಕನೂರು ಬಾರಹ ಕನ್ಯಾಪುರ ಎಂದು ಉಲ್ಲೇಖಗೊಂಡಿದೆ. ಇದು 10-13ನೆಯ ಶತಮಾನಗಳಲ್ಲಿ ಆಳಿದ ತುಳುನಾಡಿನ ಪ್ರಸಿದ್ಧ ಅರಸು ಮನೆತನವಾದ ಆಳುಪರ ರಾಜಧಾನಿಗಳಲ್ಲೊಂದಾಗಿತ್ತು. ಅನಂತರ ಕೆಲವುಕಾಲ ಹೊಯ್ಸಳರ ಉಪರಾಜಧಾನಿಗಳಲ್ಲಿ ಒಂದಾಗಿತ್ತು. ವಿಜಯನಗರದ ಕಾಲದಲ್ಲೂ ಇದು ಮುಖ್ಯ ಸ್ಥಳವಾಗಿದ್ದು ಅನಂತರ ಕೆಳದಿ ನಾಯಕರ ವಶವಾಯಿತು. ಆ ಕಾಲದಲ್ಲಿ ಇದು ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಇಲ್ಲಿ ಒಂದು ಟಂಕಸಾಲೆ ಇದ್ದು ಇದರಲ್ಲಿ ಅಚ್ಚಾದ ನಾಣ್ಯಕ್ಕೆ ಬಾರಕೂರು ಗದ್ಯಾಣವೆಂಬ ಹೆಸರೇ ಇತ್ತು.

ಬಾರಕೂರಿನಲ್ಲಿ 8-15 ನೆಯ ಶತಮಾನಗಳ ನಡುವೆ ಕಟ್ಟಲಾದ ಕೋಟೆಕೇರಿ ಪಂಚಲಿಂಗೇಶ್ವರ, ವೇಣುಗೋಪಾಲ ಮೂಡುಕೇರಿ ಸೋಮನಾಥೇಶ್ವರ, ವೇಣುಗೋಪಾಲಕೃಷ್ಣ, ಗಜಪತಿ, ಬಿಟ್ಟಿಕೇರಿ ವಿನಾಯಕ, ಮಣಿಗಾರಕೇರಿ ಸಿದ್ಧೇಶ್ವರ, ಪಾಠಶಾಲಕೇರಿ ವೀರಭದ್ರ, ಚೆಳಿಗೇರಿ ಗಣಪತಿ, ಶಿವ, ನಾಗರಮಠದ ಕೇಶವ - ಈ ದೇವಾಲಯಗಳಿವೆ. ಕೋಟಕೇರಿ ಪಂಚಲಿಂಗೇಶ್ವರ ದೇವಾಲಯ ಚಾಳುಕ್ಯ, ಹೊಯ್ಸಳ ವಿಜಯನಗರ ಕಾಲದ ವಾಸ್ತು ಶಿಲ್ಪದ ಬೆಳವಣಿಗೆಯ ಮೂರು ಘಟ್ಟಗಳನ್ನು ನಿರೂಪಿಸುತ್ತದೆ. ಸೋಮನಾಥ ದೇವಾಲಯದ ನವರಂಗದಲ್ಲಿ ಹೊಯ್ಸಳರ ಕಾಲಕ್ಕೂ ಮುಂಚಿನ ಸರಸ್ಪತಿ ಜನಾರ್ಧನ ವಿಗ್ರಹಗಳನ್ನು ಕಾಣಬಹುದಾಗಿದೆ. ಈ ದೇವಾಲಯಗಳು ಐತಿಹಾಸಿಕ ಮಹತ್ವವುಳ್ಳ ಹಲವಾರು ಶಾಸನಗಳನ್ನೊಳಗೊಂಡಿವೆ.

ಊರಿನ ಪಶ್ಚಿಮ ಮತ್ತು ಪೂರ್ವಭಾಗಗಳಲ್ಲಿ ಆಳುಪರ ಹಾಗೂ ವಿಜಯನಗರ ಅರಸರ ಕಾಲದಲ್ಲಿ ಕಟ್ಟಲಾದ ಎರಡು ಕೋಟೆಗಳ ಅವಶೇಷಗಳನ್ನು ಇಂದಿಗೂ ಕಾಣಬಹುದು. ಊರಿನಲ್ಲಿ ಮೂರು ಜೈನ ಬಸದಿಗಳೂ ಇವೆ. ಬಾರಕೂರಿನ ಬಳಿ ಆದಿಚಾರಿತ್ರಿಕ ಕಾಲದ ನೆಲೆಯನ್ನೂ ಗುರುತಿಸಲಾಗಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ